ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) 1909 ರಲ್ಲಿ ಮೈಸೂರು ಮಹಾರಾಜರು, ಕೈಗಾರಿಕೋದ್ಯಮಿ ಜೆಮ್ ಷೆಡ್ ಜಿ ನುಸರ್ ವಾಂಜಿ ಟಾಟಾ ಮತ್ತು ಭಾರತ ಸರ್ಕಾರದ ನಡುವಿನ ದಾರ್ಶನಿಕ ಸಹಭಾಗಿತ್ವದಿಂದ ಸ್ಥಾಪಿಸಲ್ಪಟ್ಟಿತು. ಸ್ಥಾಪನೆಯಾದ 107 ವರ್ಷಗಳಲ್ಲಿ, ಐಐಎಸ್ಸಿ ಭಾರತದ ಮುಂದುವರಿದ ವೈಜ್ಞಾನಿಕ ಶಿಕ್ಷಣದ ಹಾಗೂ ತಾಂತ್ರಿಕ ಸಂಶೋಧನೆಯ ಪ್ರಧಾನ ಸಂಸ್ಥೆಯಾಗಿದೆ. ಪ್ರಾರಂಭದಿಂದಲೂ, ಸಂಸ್ಥೆಯು ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೂಲಭೂತ ಜ್ಞಾನದ ಅನ್ವೇಷಣೆಗೆ ಸಮತೋಲಿತ ಒತ್ತು ನೀಡಿ ಕೈಗಾರಿಕಾ ಮತ್ತು ಸಾಮಾಜಿಕ ಪ್ರಯೋಜನಕ್ಕಾಗಿ ಅದರ ಸಂಶೋಧನೆಯ ಅನ್ವೇಷಣೆಯನ್ನು ಬಳಸುತ್ತಿದೆ. ಐಐಎಸ್ಸಿ ಸಂಸ್ಥಾಪಕರಾದ ಜೆ.ಎನ್.ಟಾಟಾರವರ ನುಡಿಯಲ್ಲಿ, ಸಂಸ್ಥೆಯ ಮಹದುದ್ದೇಶ ಹೀಗಿದೆ -“ಆಧುನಿಕ ಜ್ಞಾನವನ್ನು ಒದಗಿಸುವುದು ಮತ್ತು ಎಲ್ಲಾ ವೈಜ್ಞಾನಿಕ ಕ್ಷೇತ್ರಗಳಲ್ಲೂ ನೈಜ ಸಂಶೋಧನೆಗಳನ್ನು ನಡೆಸಿ ಭಾರತದ ಭೌತಿಕ ಮತ್ತು ಕೈಗಾರಿಕಾ ಕಲ್ಯಾಣವನ್ನು ಉತ್ತೇಜಿಸುವುದು.”
2015-16ರ ಅವಧಿಯಲ್ಲಿ, ನಮ್ಮ ಸಂಸ್ಥೆಯು ರಾಷ್ಟ್ರೀಯ (NIRF) ಮತ್ತು ಅಂತರರಾಷ್ಟ್ರೀಯ ಶ್ರೇಯಾಂಕಗಳಲ್ಲಿ (QS ಮತ್ತು THE) ಭಾಗವಹಿಸಿ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುನ್ನತ ಶಿಕ್ಷಣ ಸಂಸ್ಥೆಯೆಂದು ಬಿರುದಾಕಿಂತವಾಗಿದೆ. ಸಂಸ್ಥೆಯು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ನೀತಿಯನ್ನು ಅನುಸರಿಸುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಸರಿಸುಮಾರು 500ರಷ್ಟು ಬೋಧಕ ಸಿಬ್ಬಂದಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್`ನಲ್ಲಿ ವಿಶಾಲ ವ್ಯಾಪ್ತಿಯ ಸಂಶೋಧನೆಗಳಲ್ಲಿ ಸಕ್ರಿಯವಾಗಿದ್ದು, ವಾರ್ಷಿಕವಾಗಿ ಅತಿಹೆಚ್ಚು ಅತ್ಯುನ್ನತ ಪ್ರಕಟಣೆಗಳನ್ನು ಪ್ರಕಟಿಸುತ್ತಿದ್ದಾರೆ. ಸಂಸ್ಥೆಯ ಹಲವಾರು ಸಿಬ್ಬಂದಿ ಸದಸ್ಯರು ವಿಜ್ಞಾನ ಮತ್ತು ಎಂಜಿನಿಯರಿಂಗ್’ನಲ್ಲಿ ಜ್ಞಾನಾಭಿವೃದ್ದಿಗೆ ಅಪಾರವಾದ ಕೊಡುಗೆ ನೀಡುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಬೋಧನಾ ವಿಭಾಗದ ಸದಸ್ಯರ ಪೈಕಿ 93 ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ವಿಜೇತರು, 114 INSA, 117 IISc, 81 NASI, 72 INA ಮತ್ತು 70 ಜೆಸಿ ಬೋಸ್ ನ್ಯಾಷನಲ್ ಫೆಲೋ ಪುರಸ್ಕಾರಗಳು ಸಂಸ್ಥೆಯ ಅಧ್ಯಾಪಕರ ಉನ್ನತ ಮಟ್ಟದ ಶೈಕ್ಷಣಿಕ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಒಟ್ಟು 4000 ವಿದ್ಯಾರ್ಥಿಗಳಲ್ಲಿ, ಸುಮಾರು 2200 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್’ನಲ್ಲಿ ಡಾಕ್ಟರೇಟ್ ಪದವಿ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ. 2011 ರಲ್ಲಿ, ಸಂಸ್ಥೆಯು ಸ್ನಾತಕಪೂರ್ವ ಪದವಿ ಕಾರ್ಯಕ್ರಮಗಳನ್ನು ಪ್ರತ್ಯೇಕ ಪಾಠದ ಕೊಠಡಿ, ಪ್ರಯೋಗಾಲಯ ಮತ್ತು ಪ್ರತ್ಯೇಕ ಡೀನ್’ನೊಂದಿಗೆ ಪರಿಚಯಿಸಿತು. ಸ್ನಾತಕಪೂರ್ವ ಪದವಿಯು ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಸೈನ್ಸ್ (ಸಂಶೋಧನೆ) ಪದವಿಯಾಗಿದ್ದು, ಇದರಲ್ಲಿ ಅವರ ಪಠ್ಯ ಮತ್ತು ಪ್ರಯೋಗಾಲಯ ಕೆಲಸದ ಹೊರತಾಗಿ, ವಿದ್ಯಾರ್ಥಿಗಳು ಸಂಸ್ಥೆಯ ಪ್ರಯೋಗಾಲಯಗಳಲ್ಲಿ ಸಂಶೋಧನೆಗೆ ತೊಡಗಿಕೊಳ್ಳಲು ಅನುವುಮಾಡಿಕೊಟ್ಟಿದೆ. ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಸೈನ್ಸ್ (ಸಂಶೋಧನೆ) ಪದವಿಯ ವಿದ್ಯಾರ್ಥಿಗಳು ಐದು ವರ್ಷಗಳ ಅಧ್ಯಯನದ ಮೂಲಕ ಎರಡು ಪದವಿ (ಅಂದರೆ, ಮಾಸ್ಟರ್ ಆಫ್ ಸೈನ್ಸ್ ಕೂಡ) ಸ್ನಾತಕೋತ್ತರ ಪದವೀಧರರಾಗಬಹುದು. ಈ ಪದವಿ ಕಾರ್ಯಕ್ರಮಕ್ಕೆ ಸುಮಾರು 500 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ಇನ್ನೂ ಹಲವಾರು ಸ್ನಾತಕೋತ್ತರ ಪದವಿಯನ್ನು (MTech, MTech(ಸಂಶೋಧನೆ), MDes, ಮತ್ತು MMgmt) ನೀಡುತ್ತಿದೆ, ಇದರಲ್ಲಿ ಸುಮಾರು 1000 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಸಂಸ್ಥೆಯ ವಾರ್ಷಿಕ ಸಂಶೋಧನಾ ವೆಚ್ಚ ಮತ್ತು ಮರುಕಳಿಸುವ ಖರ್ಚುಗಳನ್ನು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಒದಗಿಸುತ್ತದೆ. ಸಂಸ್ಥೆಯ ಬೋಧಕ ಸಿಬ್ಬಂದಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ (DST), ಜೈವಿಕ ತಂತ್ರಜ್ಞಾನ ವಿಭಾಗ (DBT), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅನೇಕ ಇನ್ನಿತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ, ಇಂತಹ ಸಂಶೋಧನೆಗಾಗಿ ಬಾಹ್ಯ ಹಣವು ವಾರ್ಷಿಕ ದರದಲ್ಲಿ ಶೇಕಡ 19.5ರಷ್ಟು ಹೆಚ್ಚಾಗಿದೆ. ಸಂಸ್ಥೆ ಮತ್ತು ಉದ್ಯಮದ ನಡುವಿನ ಸಂವಹನಗಳನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಲಹಾ ಕೇಂದ್ರ (CSIC), ಆವಿಷ್ಕಾರ ಮತ್ತು ಅಭಿವೃದ್ಧಿ ಸಂಘ (SID) ಮತ್ತಿತರ ನಿರ್ದಿಷ್ಟ ಕೇಂದ್ರಗಳ ಮೂಲಕ ಸರ್ಕಾರ, ಸಮಾಜ ಮತ್ತು ಕೈಗಾರಿಕೆಗಳೊಂದಿಗೆ ಪರಸ್ಪರ ಸಂಪರ್ಕವನ್ನು ಸ್ಥಾಪಿಸಿದೆ. ಸಂಸ್ಥೆಯನ್ನು ಭಾರತದ ಅತ್ಯುನ್ನತ ಸ್ಥಾನದಿಂದ ವಿಶ್ವದಲ್ಲಿಯೇ ಉನ್ನತ ಸ್ಥಾನಕ್ಕೇರಿಸಲು ಹೆಚ್ಚಿನ ಆರ್ಥಿಕ ನೆರವಿನ ಅವಶ್ಯಕತೆಯಿದೆ. ಸಂಸ್ಥೆಯು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟಿದೆ.
ಈ ಇತಿಹಾಸದೊಂದಿಗೆ, ಇತ್ತೀಚಿನ ವರ್ಷಗಳಲ್ಲಿ, ಸಂಸ್ಥೆಯಲ್ಲಿನ ಉದ್ಯಮಶೀಲತೆಯ ಪ್ರಾರಂಭಿಕ ಯೋಜನೆಗಳಿಗೆ ಹಲವಾರು ಖಾಸಗಿ ಮೂಲಗಳಿಂದ ಆರ್ಥಿಕ ನೆರವನ್ನು ಪಡೆಯುತ್ತಿದೆ. ಟಾಟಾ ಟ್ರಸ್ಟ್ ನಿಂದ ನರವಿಜ್ಞಾನ ಸಂಶೋಧನೆಗೆ 75 ಕೋಟಿ ರೂಗಳ ಅನುದಾನ ದೊರೆತಿದೆ. ಶ್ರೀ ಮತ್ತು ಶ್ರೀಮತಿ ಕ್ರಿಸ್ ಗೋಪಾಲಕೃಷ್ಣನ್ 225 ಕೋಟಿ ರೂ.ಗಳಷ್ಟು ಅನುದಾನವನ್ನು ಸೆಂಟರ್ ಫಾರ್ ಬ್ರೈನ್ ರಿಸರ್ಚ್ (ಸಿಬಿಆರ್) ಸ್ಥಾಪನೆಗೆ ನೀಡಿದ್ದು ಈ ಕೇಂದ್ರವು ವಯಸ್ಸಾದ ಮಾನವ ಮಿದುಳಿನ ರೋಗಗಳ ಮೇಲೆ ಸಂಶೋಧನೆ ನಡೆಸಲಿದೆ ಮತ್ತು 10 ಕೋಟಿ ರೂಗಳನ್ನು ಕೆ. ವೈದ್ಯನಾಥನ್, ಚೇರ್ ಇನ್ ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್ ರವರಿಗೆ ನೀಡಿದ್ದಾರೆ. ಐಐಎಸ್ಸಿ ಸಂಸ್ಥೆಯ ಸಮಿತಿಯು ಐಐಎಸ್ಸಿ ಆವರಣದಲ್ಲಿ ಸಿಬಿಆರ್ ಕಟ್ಟಡವನ್ನು ಸ್ಥಾಪಿಸಲು ಅನುಮತಿ ನೀಡಿದ್ದು ಇದನ್ನು ಶ್ರೀ ಮತ್ತು ಶ್ರೀಮತಿ ಗೋಪಾಲಕೃಷ್ಣನ್ ಅಭಿವೃದ್ಧಿಪಟಿಸಿದ್ದಾರೆ. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ವಿಭಾಗದಲ್ಲಿ ಅಂತರಾಷ್ಟ್ರೀಯ ಅತಿಥಿ ಅಧ್ಯಾಪಕರು ಭೇಟಿ ನೀಡುವ ಅವಕಾಶವನ್ನು ಇನ್ಫೋಸಿಸ್ ಫೌಂಡೇಶನ್ ಕಲ್ಪಿಸಿದೆ. ಇತ್ತೀಚಿಗೆ ಪ್ರಮುಖ ಒಪ್ಪಂದಗಳನ್ನು ಐಐಎಸ್ಸಿ ಮತ್ತು ಟಾಟಾ ಕನ್ಸಲ್ಟಿಂಗ್ ಸರ್ವೀಸಸ್ (TCS), ಜನರಲ್ ಎಲೆಕ್ಟ್ರಿಕ್ (GE), ಹೆವ್ಲೆಟ್ ಪ್ಯಾಕರ್ಡ್ (HP) ಮತ್ತು ರಾಬರ್ಟ್ ಬಾಶ್ ನೊಂದಿಗೆ ಈ ಎಲ್ಲಾ ಕಂಪನಿಗಳು ಮತ್ತು ಸಂಸ್ಥೆಯ ನಡುವಿನ ವಿಚಾರ ವಿನಿಮಯಗಳನ್ನು ಉತ್ತೇಜಿಸಲು ಅನುವು ಮಾಡಿಕೊಟ್ಟಿದೆ. 2014-15ರಲ್ಲಿ ಡೆವಲಪ್ಮೆಂಟ್ ಆಂಡ್ ಅಲುಮ್ನಿ ಅಫೇರ್ಸ್ (ODAA) ಕಛೇರಿಯನ್ನು ಸ್ಥಾಪಿಸಲಾಯಿತು, ಇದು ಈಗಾಗಲೇ ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ) ನಲ್ಲಿರುವ ಹೊಸ ಐಐಎಸ್ಸಿ ಎಕ್ಸ್ಟೆನ್ಶನ್ ಕ್ಯಾಂಪಸ್ನಲ್ಲಿ ನೂತನ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ, ಶೈಕ್ಷಣಿಕ ಸಂಸ್ಥೆಯ ಅಭಿವೃದ್ಧಿಗೆ ಈಗಾಗಲೇ ವಿವಿಧ ಖಾಸಗಿ ಮೂಲಗಳಿಂದ ಆರ್ಥಿಕ ನೆರವನ್ನು ಕ್ರೂಡಿಕರಿಸಿದೆ. ಕಳೆದ ಒಂದೂವರೆ ದಶಕಗಳಲ್ಲಿ “ಭಾರತದ ವಸ್ತು ಮತ್ತು ಕೈಗಾರಿಕಾ ಕಲ್ಯಾಣ” ವನ್ನು ಉತ್ತೇಜಿಸುವ ಸಂಸ್ಥಾಪಕರ ದೂರದೃಷ್ಟಿಯೊಂದಿಗೆ ಸಂಸ್ಥೆಯು ತನ್ನ ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಸಂಶೋಧನಾ ಫಲಿತಾಂಶಗಳನ್ನು ತಂತ್ರಜ್ಞಾನದ ಪರವಾನಗಿಯ ಮೂಲಕ ಅಥವಾ ಉದ್ಯಮಶೀಲತೆಯ ಮೂಲಕ ಉತ್ಪನ್ನಗಳಾಗಿಸಲು ಸಹಕಾರ ನೀಡುತ್ತಿದೆ. ಉದಾಹರಣೆಗೆ, ಅನಿಲ ಸೋರುವಿಕೆಯ ಸಂವೇದಕಗಳು, ವಿದ್ಯುತ್ ಶೇಖರಣಾ ಸಾಧನಗಳು ಮತ್ತು ಸಂಬಂಧಿತ ಪರೀಕ್ಷಾ ಸಲಕರಣೆಗಳು ಮತ್ತು ಶಿಲೀಂಧ್ರ ಕೀಟನಾಶಕಗಳು ಈಗಾಗಲೇ ಪರವಾನಗಿ ಪಡೆದಿವೆ. ವರ್ಧಿತ ವಿದ್ಯುತ್ ಪ್ರವಣತೆ ಆಧಾರಿತ ಜಲ ಶೋಧನೆ ಸಾಧನ, ಮಧುಮೇಹ ಉಸ್ತುವಾರಿಗಾಗಿ ಬಹು-ವಿಶ್ಲೇಷಣಾತ್ಮಕ ಸಾಧನ, ರೋಗನಿದಾನಕ್ಕಾಗಿ ಮೈಕ್ರೋ-ಫ್ಲುಯಿಡಿಕ್ಸ್ ಆಧಾರಿತ ಸೆಲ್ ಕೌಂಟರ್ ಮತ್ತು ರಾಚನಿಕ ಮೇಲ್ವಿಚಾರಣೆಗಾಗಿ ಆಪ್ಟಿಕಲ್ ಫೈಬರ್ ಸಂವೇದಕಗಳು ಮುಂತಾದ ಇತರ ತಂತ್ರಜ್ಞಾನಗಳ ಸಂಶೋಧಕರು “ಸ್ಟಾರ್ಟ್-ಅಪ್” ಮಾರ್ಗವನ್ನು ಹಿಡಿದಿದ್ದಾರೆ.
ಅನುರಾಗ್ ಕುಮಾರ್